ಬ್ರಾಹ್ಮಣ ವಿರೋಧೀ ಮೂಲ ಒಡೆದು ಆಳುವ ವಸಾಹತು ಆಡಳಿತದಲ್ಲಿದೆ. ಭಾರತೀಯ ಸಮಾಜವನ್ನು ಅಧೀನದಲ್ಲಿಟ್ಟುಕೊಳ್ಳಲು ದ್ವಿಜಜಾತಿಗಳನ್ನು ದಾರಿತಪ್ಪಿಸಿ, ಇತರ ವರ್ಣ/ಜಾತಿಗಳಿಂದ ಬೇರ್ಪಡಿಸಿ, ತುಳಿದಿಡಬೇಕು ಎಂಬ ಮೂಲಸೂತ್ರವನ್ನು ಬ್ರಿಟಿಷರು ರೂಪಿಸಿದರು. ವೈಶ್ಯರ ವ್ಯಾಪಾರ ಯುರೋಪಿನ ವ್ಯಾಪಾರೀ ಕಂಪನಿಗಳ ಮೊದಲ ಆಹುತಿಯಾದರೆ, ಕ್ಷತ್ರಿಯರೊಬ್ಬಬ್ಬರನ್ನೇ ವಿವಿಧ ತಂತ್ರಗಳಿಂದ ಹತ್ತಿಕ್ಕಿ ರಾಜ್ಯ ವಿಸ್ತರಿಸಿದರು. ಕೊನೆಯ ಹಂತದಲ್ಲಿ ರಾಜ್ಯಗಳ ವಾರಸುದಾರರಾಗಿದ್ದ ಬಾಲ-ತರುಣ ರಾಜರ ಬುದ್ದಿಯನ್ನೇ ಕಲುಷಿತಗೊಳಿಸಿ ಮಾನಸಿಕವಾಗಿ ಐರೋಪ್ಯರನ್ನಾಗಿ ಪರಿವರ್ತಿಸಿದರು.
ಇದೇ ಕಾರಣದಿಂದ, ಬ್ರಾಹ್ಮಣರನ್ನು ವೇದವಿದ್ಯೆಯಿಂದ ಬೇರ್ಪಡಿಸಿ, ಅವರಿಗೆ ಐರೋಪ್ಯ ಶಿಕ್ಷಣ ನೀಡಿ ತಮ್ಮ ಆಡಳಿತದಲ್ಲೇ ಉದ್ಯೋಗ ನೀಡುತ್ತಾ ಜೊತೆಜೊತೆಗೆ ಅವರ ಬಗ್ಗೆ ಇತರ ಭಾರತೀಯರ ಮಧ್ಯೆ ವ್ಯವಸ್ಥಿತ ಅಪಪ್ರಚಾರ ಮಾಡಿದರು. ಶೂದ್ರರನ್ನು ಅಸಮಾನತೆಗೆ ಗುರಿಮಾಡಿದವರೆಂಬ, ರಾಜ್ಯದ ಸಂಪತ್ತನ್ನು ಸೂರೆಗೊಂಡವರೆಂಬ ಮತ್ತು ವಿದ್ಯೆಯನ್ನು ನಿರಾಕರಿಸದವರೆಂಬ ಹತ್ತು ಹಲವು ಆರೋಪಗಳು ಪ್ರಾರಂಭವಾಗಿದ್ದು ಅಂದಿನಿಂದಲೇ. ರಾಜರುಗಳ ಅಧೀನದಲ್ಲಿದ್ದ ಧಾರ್ಮಿಕ ಆಡಳಿತವು ಸಂವಿಧಾನಾತ್ಮಕ ಸೆಕ್ಯುಲರ್ ಆಡಳಿತಕ್ಕೆ ಬದಲಾದಂತೆ, ಈ ಆರೋಪಗಳು ಪ್ರಬಲವಾಗುತ್ತಾ ಬಂದಿವೆ. ಇಂದು ಬ್ರಾಹ್ಮಣರ ಬಗ್ಗೆ ಸಾರ್ವಜನಿಕ ಅಸಹನೆ, ದ್ವೇಷ ಇದೆ. ಬ್ರಾಹ್ಮಣ ಸಮುದಾಯವು ಸಣ್ಣದಾಗಿದ್ದು ಶಾಂತಿಯುತವಾಗಿಯೂ ಇರುವುದರಿಂದ ಬ್ರಾಹ್ಮಣರ ಬಗೆಗಿನ ಅಪಹಾಸ್ಯ, ಅವರ ಜೊತೆ ಅಸಹಕಾರದ ವ್ಯವಹಾರಗಳು ದ್ವೇಷದ ಜೊತೆಕೂಡಿದೆ. ಎಲ್ಲರಿಗೂ ಬ್ರಾಹ್ಮಣ ಸಮುದಾಯವನ್ನು ನಿಂದನೆ ಮಾಡುವುದು ಸುಲಭ ಸಾಧ್ಯವಾಗಿದೆ.